First Woman Great Poet in Kannada

ಕುವೆಂಪು ಅವರು ‘ರಾಮಾಯಣದರ್ಶನಂ’ ರಚಿಸುವುದಕ್ಕಿಂತ 15 ವರ್ಷ ಮೊದಲೇ ‘ಶ್ರೀರಾಮಕಥಾಮೃತಸಾರ’ ಎಂಬ ಅಪ್ಪಟ ಕನ್ನಡ ಮಹಾಕಾವ್ಯವನ್ನು ಅಂಬಾಬಾಯಿ ರಚಿಸಿದ್ದರು. ಇವತ್ತಿಗೂ ಚಿತ್ರದುರ್ಗ, ರಾಣೇಬೆನ್ನೂರು, ಕದರಮಂಡಲಗಿ ಮುಂತಾದ ಊರುಗಳಲ್ಲಿ ಹಿರಿಯ ಹೆಂಗಸರು ಅಂಬಾಬಾಯಿಯವರ ಕೀರ್ತನೆಗಳನ್ನು ಹಾಡುತ್ತಾರೆ. ಊರೂರು ತಿರುಗುತ್ತಾ ಕೀರ್ತನೆಗಳನ್ನು ಪ್ರಸಾರ ಮಾಡಿದ ಪ್ರಥಮ ಮತ್ತು ಏಕೈಕ ಮಹಿಳೆ ಅಂಬಾಬಾಯಿ. ಇದೀಗ ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆ ಅಂಬಾಬಾಯಿಯವರ ‘ಶ್ರೀರಾಮಕಥಾಮೃತಸಾರ’ವನ್ನು ಪ್ರಕಟಿಸಿದೆ. ಮೊನ್ನೆಯಷ್ಟೇ (ಫೆ. 14) ಈ ಕೃತಿಗೆ ಬಿಡುಗಡೆಯ ಭಾಗ್ಯವೂ ದೊರೆತಿದೆ.

ಮಹಿಳೆಯ ಸಾಧನೆಯ ದಾಖಲೆಗಳು ಇತಿಹಾಸದಲ್ಲಿ ಬಹಳ ಕ್ಷೀಣವಾದ ಗೆರೆಗಳಲ್ಲಿ ಮಾತ್ರ ಉಳಿದಿವೆ. ಮತ್ತು ಎಷ್ಟೋ ವಿಷಯಗಳು ಕಾಣದಂತೆ ಅಳಿಸಿಯೂ ಹೋಗಿವೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಅಂಬಾಬಾಯಿ ಅವರು ರಚಿಸಿರುವ ಮಹಾಕಾವ್ಯ! ಹೊಸಗನ್ನಡ ಸಾಹಿತ್ಯಚರಿತ್ರೆಯಲ್ಲಿ ಇದು ದಾಖಲಾಗಬೇಕಾಗಿತ್ತು. ಆದರೆ ತೆರೆಮರೆಯಲ್ಲೇ ಉಳಿದಿದ್ದು ಇದೀಗ 85 ವರ್ಷಗಳ ನಂತರ ಈ ಮಹಾಕಾವ್ಯ ಮುನ್ನೆಲೆಗೆ ಬರುತ್ತಿದೆ. ಇದು ತಡವಾದರೂ ಸ್ವಲ್ಪ ಸಮಾಧಾನವನ್ನು ತರುವ ವಿಷಯ. ಅಂಬಾಬಾಯಿ ರಾಮಾಯಣವನ್ನು ಶ್ರೀ ರಾಮಕಥಾಮೃತಸಾರ ಎನ್ನುವ ಹೆಸರಿನಲ್ಲಿ ಸರಳವಾದ ಕನ್ನಡದಲ್ಲಿ, 2501 ಕುಸುಮ ಷಟ್ಪದಿಗಳಲ್ಲಿ 1934-35ರಲ್ಲಿ ರಚಿಸಿದ್ದಾರೆ. ಇದು ಕೇವಲ ಮೂರು ತಿಂಗಳಲ್ಲಿ ರಚನೆಯಾದ ಮಹಾಕಾವ್ಯ. 20ನೇ ಶತಮಾನದ ಆದಿಯಲ್ಲಿ, ರಾಷ್ಟ್ರಕವಿ ಕುವೆಂಪು ಅವರು ‘ರಾಮಾಯಣದರ್ಶನಂ’ ರಚಿಸುವ ಮೊದಲೇ ಸುಮಾರು 15-16 ವರ್ಷಗಳ ಹಿಂದೆಯೇ ಮಹಿಳೆಯೊಬ್ಬರು ಸಂಪೂರ್ಣ ಮಹಾಕಾವ್ಯವನ್ನು ರಚಿಸಿರುವುದು ಅಚ್ಚರಿಗಳಲ್ಲಿ ಒಂದು. 1902ರಲ್ಲಿ ಚಿತ್ರದುರ್ಗದ ಮಾಧ್ವಬ್ರಾಹ್ಮಣ ಬಡಕುಟುಂಬದಲ್ಲಿ ಹುಟ್ಟಿದ ಮಹಿಳೆ ಅಂಬಾಬಾಯಿ. ನಾಲ್ಕನೆಯ ತರಗತಿಯವರೆಗೆ ವಿದ್ಯಾಭ್ಯಾಸ. ನಿಷಿತಮತಿಯಾದ ಆಕೆಗೆ ಬಾಲ್ಯದಲ್ಲೇ ಕುಮಾರವ್ಯಾಸಭಾರತ ಮತ್ತು ಇತರ ಗ್ರಂಥಗಳು ಕಂಠಸ್ಥವಾಗಿದ್ದವು. ಹತ್ತನೇ ವಯಸ್ಸಿನಲ್ಲೇ ಮದುವೆ, ಕೇವಲ ಒಂದೆರಡು ವರ್ಷಗಳಲ್ಲೇ ಪತಿವಿಯೋಗ ಮತ್ತು ಕೇಶಮುಂಡನದಂಥ ಕ್ರೂರಪದ್ಧತಿಗೆ ಬಲಿ. ತುತ್ತಿನಚೀಲವನ್ನು ಒಪ್ಪತ್ತಿಗೇ ತುಂಬಲೂ ನೆಂಟರಿಷ್ಟರ ಮನೆಯಲ್ಲಿ ಜೀತದ ಬದುಕು. 1931ನೇ ಇಸವಿಯವರೆಗೆ ಹೀಗೆಯೇ ಬದುಕನ್ನು ಸವೆಸುತ್ತಿದ್ದ ಅಂಬಾಬಾಯಿಗೆ ದೇವರಾಯನದುರ್ಗದ ಪರಮಪ್ರಿಯ ಸುಬ್ಬರಾಯದಾಸರೆನ್ನುವ ಗುರುಗಳಿಂದ ಗೋಪಾಲಕೃಷ್ಣವಿಠಲ ಎನ್ನುವ ಅಂಕಿತ ಪ್ರಾಪ್ತಿಯಾಯಿತು. ಮುಂದೆ ಅವರ ಬದುಕು ಭಗವಂತನ ಸೇವೆಗೆೇ ಮುಡುಪಾಯಿತು.

ಪ್ರತಿಭೆಯ ವಿಸ್ತಾರ ಅಪಾರ: 1931ರಿಂದ 1946ರವರೆಗೆ ಕೇವಲ 15 ವರ್ಷಗಳಲ್ಲಿ ಮುನ್ನೂರಕ್ಕೂ ಹೆಚ್ಚು ದೇವರನಾಮಗಳನ್ನೂ, ಹತ್ತಾರು ದೀರ್ಘಕೃತಿಗಳನ್ನೂ, ಭಾಗವತಸಾರೋದ್ಧಾರ ಎನ್ನುವ ಸಂಸ್ಕೃತದ ಮಹತ್ಕೃತಿಯ ಸರಳಕನ್ನಡ ಭಾವಾನುವಾದವನ್ನೂ, ಮತ್ತು ಇವೆಲ್ಲಕ್ಕೂ ಕಳಶವಿಟ್ಟಂತೆ ರಾಮಾಯಣ ಮಹಾಕಾವ್ಯವನ್ನೂ ರಚಿಸಿರುವುದನ್ನು ನೋಡಿದರೆ ಈಕೆಯ ಪ್ರತಿಭೆಯ ವಿಸ್ತಾರ ಅರಿವಾಗುತ್ತದೆ. ಈ ಮೇಲಿನ ಎಲ್ಲಾ ಕೃತಿಗಳನ್ನು ಡಾ. ಅನಂತ ಪದ್ಮನಾಭರಾವ್ ಅವರು ಸಂಪಾದಿಸಿದ್ದಾರೆ ಮತ್ತು ವಿವಿಧ ಪ್ರಕಾಶಕರು ಈ ಕೃತಿಗಳನ್ನು ಪ್ರಕಟಿಸಿದ್ದಾರೆ.

ಹಲವು ಪ್ರಥಮಗಳು: ಹಾಗೆ ನೋಡಿದರೆ ಅಂಬಾಬಾಯಿ ಅನೇಕ ಪ್ರಥಮಗಳನ್ನು ಸಾಧಿಸಿದ್ದಾರೆ. ತಮ್ಮ38ನೇ ವಯಸ್ಸಿನಲ್ಲಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಊರೂರು ಸುತ್ತುತ್ತಾ ಹರಿದಾಸ ಪಂಥವನ್ನು ಏಕಾಂಗಿನಿಯಾಗಿ ಪ್ರಚಾರ ಮಾಡಿದ್ದಾರೆ. ಸುಶ್ರಾವ್ಯ ಕಂಠದಲ್ಲಿ ಹಾಡುತ್ತಾ ಜಾತಿ ಮತ ಪಂಗಡಗಳನ್ನು ಲೆಕ್ಕಿಸದೆ ಸಕಲರಿಗೂ ದೇವರನಾಮಗಳನ್ನು ಕೇಳುವುದರಿಂದ ಮತ್ತು ಹಾಡುವುದರಿಂದ ಲಭಿಸಬಹುದಾದ ಮನಃಶಾಂತಿ ಹಾಗೂ ನೆಮ್ಮದಿಗಳನ್ನು ಹಂಚಿದ್ದಾರೆ. ಸದಾ ತಮ್ಮ ಜೋಳಿಗೆಯಲ್ಲಿ ಕಾಗದ ಮತ್ತು ಮಸಿದೌತಿ (ಆಗಿನ ಕಾಲದಲ್ಲಿ ಪೆನ್ನು ಇನ್ನೂ ಜನಪ್ರಿಯವಾಗಿರಲಿಲ್ಲ) ಮತ್ತು ಲೇಖನಿಗಳನ್ನು ಇಟ್ಟುಕೊಂಡು ಕೇಳಿದ ಮಹಿಳೆಯರಿಗೆಲ್ಲಾ ತಮ್ಮದೇ ರಚನೆಗಳನ್ನು ‘‘ಇದು ಯಾರೋ ಗೋಪಾಲಕೃಷ್ಣವಿಠಲ ದಾಸರದು, ರಾಗ ಮತ್ತು ಪದಗಳು ಸರಳವಾಗಿದೆ, ನಾನು ಹೇಳಿಕೊಡುತ್ತೇನೆ, ನೀವು ಕಲಿತುಕೊಂಡು ಹಾಡಿ’’ ಎಂದು ಪ್ರಸಾರ ಮಾಡಿದ್ದಾರೆ. ತಮ್ಮದೇ ರಚನೆಗಳನ್ನು ಬೇರೆಯವರದೆಂದು ಹೇಳಿ ಪ್ರಚಾರ ಮಾಡಿದ್ದು ಅವರ ನಿಸ್ವಾರ್ಥ ವ್ಯಕ್ತಿತ್ವದ ದ್ಯೋತಕ. ಅದಲ್ಲದೇ ಪುರಂದರದಾಸರು, ಕನಕದಾಸರು, ಮುಂತಾದ ಪ್ರಾಚೀನದಾಸರ ಕೀರ್ತನೆಗಳನ್ನೂ ಪ್ರಸಾರ ಮಾಡಿದ್ದಾರೆ. ಇವತ್ತಿಗೂ ಚಿತ್ರದುರ್ಗ, ರಾಣೇಬೆನ್ನೂರು, ಕದರಮಂಡಲಗಿ ಮುಂತಾದ ಊರುಗಳಲ್ಲಿ ಹಿರಿಯ ಹೆಂಗಸರು ಅಂಬಾಬಾಯಿಯವರ ಕೀರ್ತನೆಗಳನ್ನು ಹಾಡುತ್ತಾರೆ. ದಾಸಪಂಥದಲ್ಲೇ ಹೀಗೆ ಊರೂರು ತಿರುಗುತ್ತಾ ಕೀರ್ತನೆಗಳನ್ನು ಪ್ರಸಾರ ಮಾಡಿದ ಪ್ರಥಮ ಮತ್ತು ಏಕೈಕ ಮಹಿಳೆ ಈಕೆ.

ಹಾಡುಗಾರ್ತಿ, ಪ್ರವಚನಕಾರ್ತಿ: ತಮ್ಮದೇ ರಚನೆಯಾದ ರಾಮಾಯಣವನ್ನು ವಿವಿಧ ವೇದಿಕೆಗಳಲ್ಲಿ ಪ್ರವಚನ ಮಾಡಿದ ಪ್ರಥಮ ಮಹಿಳೆಯೂ ಅಂಬಾಬಾಯಿಯೇ ಆಗಿದ್ದಾರೆ. ಅವರ ಸುಂದರ ಕಾಂಡದ ಹಾಡುವಿಕೆ ಮತ್ತು ಪ್ರವಚನ, ಆ ಕಾಲಕ್ಕೆ ಅತ್ಯಂತ ಜನಪ್ರಿಯವಾಗಿತ್ತು. ಆಕೆ ‘ಮಡಿಹೆಂಗಸು’ ಎನ್ನುವುದನ್ನೂ ಲೆಕ್ಕಿಸದೇ ತಮ್ಮ ಮನೆಗಳಲ್ಲಿ ಸುಂದರಕಾಂಡವನ್ನು ಪಾರಾಯಣ ಮಾಡಿಸಲು ಆಸಕ್ತರು ಹಾತೊರೆಯುತ್ತಿದ್ದರು. ಹಾಗೆ ಅವರಿಂದ ಹೇಳಿಸಿದರೆ ಮನೆಗೆ ಒಳ್ಳೆಯದಾಗುತ್ತದೆ ಎನ್ನುವ ಮಾತೂ ಜನಜನಿತವಾಗಿತ್ತು. ಚಿತ್ರದುರ್ಗ, ಹರಿಹರ ಮುಂತಾದೆಡೆಗಳಲ್ಲಿ ಅವರನ್ನು ‘ಸುಂದರಕಾಂಡದ ಅಂಬಾಬಾಯಿ’ ಎಂದೇ ಜನ ಗುರುತಿಸುತ್ತಿದ್ದರು. ಅವರು ತಮ್ಮತಂಗಿಗೆ ಹರಿಹರದಿಂದ ಬರೆದ ಒಂದು ಪತ್ರದಲ್ಲಿ ‘‘ನಾವು ಹರಿದಾಸರು. ಒಂದೇ ಮನೆಯಲ್ಲಿ ಒಂದೇ ಊರಿನಲ್ಲಿ ಹೆಚ್ಚುಕಾಲ ತಂಗಬಾರದು. ಆದರೆ ಈ ಊರಿನ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಸ್ವಲ್ಪ ದಿನ ಇದ್ದು ಸುಂದರಕಾಂಡ ಪಾರಾಯಣ ಮಾಡಲು ಹೇಳುತ್ತಿದ್ದಾರೆ. ನಾನು ಸಂಕೋಚದಿಂದ ಬೇಡವೆಂದರೆ ಆಕೆಯ ಪತಿ ಮತ್ತು ಮಾವನವರೂ ಇದೊಂದು ಕಾರ್ಯ ನಡೆಸಿಕೊಡಿ ಎಂದು ಕೇಳುತ್ತಿದ್ದಾರೆ. ಏನು ಮಾಡುವುದು ಹರಿಚಿತ್ತ’’ ಎಂದು ಬರೆದಿದ್ದಾರೆ. ಹಾಡುಗಬ್ಬ: ವಾಲ್ಮೀಕಿ ರಾಮಾಯಣದಂತೆಯೇ ‘ಶ್ರೀರಾಮಕಥಾಮೃತ’ದಲ್ಲಿ ಆರು ಕಾಂಡಗಳಿವೆ. 2501 ಕುಸುಮ ಷಟ್ಪದಿಗಳಿವೆ. ವಾಲ್ಮೀಕಿಯ ನಂತರವೆಂದು ಹೇಳಲಾದ ಉತ್ತರಕಾಂಡ ಇವರ ರಾಮಾಯಣದಲ್ಲೂ ಇಲ್ಲ. ಶ್ರೀರಾಮಪಟ್ಟಾಭಿಷೇಕದೊಡನೆ ಕಾವ್ಯ ಮುಕ್ತಾಯವಾಗುತ್ತದೆ. ಪ್ರಾರಂಭದಲ್ಲಿ ಲವಕುಶರು ಶ್ರೀರಾಮನ ಮುಂದೆ ರಾಮಾಯಣವನ್ನು ಹಾಡಿದಂತೆ ರಚಿಸಲಾಗಿದೆ. ಈ ಕಥೆಯನ್ನು ರಾಮನಿಗೆ ಅರ್ಪಿಸುತ್ತಿರುವುದರಿಂದ ಪ್ರತಿ ಪದ್ಯದ ಕೊನೆ ‘ರಾಮಚಂದ್ರ’ ಎನ್ನುವ ಪದದಿಂದ ಮುಕ್ತಾಯವಾಗುತ್ತದೆ. ಈ ಕಾವ್ಯ ಮಹಿಳೆಯರು ತಮ್ಮ ದಿನಗೆಲಸಗಳನ್ನು ಮಾಡಿಕೊಳ್ಳುತ್ತಲೇ ಹಾಡಿಕೊಳ್ಳಬಹುದಾದ ಹಾಡುಗಬ್ಬವಾಗಿದ್ದು, ಪ್ರತಿನುಡಿಯಲ್ಲಿಯೂ ಕೊನೆಗೆ ಬರುವ ‘ರಾಮಚಂದ್ರ’ ಪದ ನೆನಪಿಗೆ ಸಹಕಾರಿಯಾಗುತ್ತದೆ.

ಅಂಬಾಬಾಯಿಯವರು ಕುಮಾರವ್ಯಾಸ ಭಾರತದಿಂದ ಬಹಳ ಪ್ರಭಾವಿತರಾಗಿದ್ದಾರೆ. ಹಾಗೂ ತಾವು ಮೂಲರಾಮಾಯಣವನ್ನು ಕನ್ನಡದ ಅನುವಾದದಲ್ಲಿ ಓದಿರುವುದಾಗಿ ತಮ್ಮ ದಿನಚರಿಯಲ್ಲಿ ತಿಳಿಸಿದ್ದಾರೆ. ಆದ್ದರಿಂದಲೇ ಅವರ ರಾಮಾಯಣದ ಘಟನೆಗಳು ಮೂಲಕ್ಕೆ ಹತ್ತಿರವಾಗಿವೆ. ಹಾಗೂ ಅಲ್ಲಲ್ಲಿ ತಮಗೆ ಅಗತ್ಯವೆನಿಸಿದಲ್ಲಿ ಬದಲಾವಣೆಯನ್ನೂ ಮಾಡಿಕೊಳ್ಳುತ್ತಾರೆ. ವಾಲ್ಮೀಕಿಗೆ ರಾಮಾಯಣ ಬರೆಯಲು ರಾಮಕಥೆ ಮುಖ್ಯವಾದರೆ ಅಂಬಾಬಾಯಿಯವರಿಗೆ ರಾಮಾಯಣ ಬರೆಯಲು ರಾಮಭಕ್ತಿ ಮುಖ್ಯವಾಗುತ್ತದೆ. ವಾಲ್ಮೀಕಿ ರಾಮಾಯಣದ ನಂತರ, ಕುಮಾರವ್ಯಾಸ ‘‘ತಿಣುಕಿದನು ಫಣಿರಾಯ ರಾಮಾಯಣದ ಭಾರದಲಿ’’ ಎಂದು ಹೇಳಿದಂತೆ ಅಸಂಖ್ಯಾತ ರಾಮಾಯಣಗಳು ರಚನೆಯಾಗಿವೆ. ಆನಂದರಾಮಾಯಣ, ಅದ್ಭುತರಾಮಾಯಣ ಮುಂತಾದ ರಾಮಾಯಣಗಳಂತೆ ಅಂಬಾಬಾಯಿಯವರದು ‘ಭಕ್ತಿರಾಮಾಯಣ’ ಎಂದು ಕರೆಸಿಕೊಳ್ಳಲು ಯೋಗ್ಯವಾಗಿದೆ. 1946ರಲ್ಲಿ 44 ವರ್ಷದ ಈ ಕವಯತ್ರಿಯ ಬದುಕಿನ ಯಾತ್ರೆ ಮುಗಿಯಿತು.

ಆ ಕಾಲಕ್ಕೇ ಡೈರಿ ಬರೆಯುತ್ತಿದ್ದರು!: ಹೀಗೆ ಊರೂರು ತಿರುಗುವಾಗ 88 ದಿನಗಳ ದಿನಚರಿಯನ್ನು ಬರೆದಿದ್ದಾರೆ. ಡೈರಿ ಬರೆಯುವುದು ಪಾಶ್ಚಾತ್ಯ ಸಂಸ್ಕೃತಿ. ಪಾಶ್ಚಾತ್ಯ ಸಂಸ್ಕೃತಿಯ ಗಾಳಿಗಂಧವರಿಯದ ಈಕೆ, ಕೇವಲ ತನ್ನ ಈ ಪ್ರಸಾರ ಮತ್ತು ಪ್ರಚಾರ ಕೆಲಸಗಳನ್ನು ತಮ್ಮ ಗುರುಗಳಿಗೆ ತಿಳಿಸುವ ಏಕಮಾತ್ರ ಉದ್ದೇಶದಿಂದ ತಾವು ದಿನಚರಿ ಬರೆಯುತ್ತಿರುವುದಾಗಿ ಪ್ರಾರಂಭದಲ್ಲೇ ತಿಳಿಸಿದ್ದಾರೆ. ಹೀಗೆ ಕನ್ನಡದ ಕವಯತ್ರಿಯೊಬ್ಬರು ದಿನಚರಿಯನ್ನು ಬರೆದಿರುವುದು ಪ್ರಥಮಪ್ರಯತ್ನವೂ ಅತ್ಯಂತ ಸೋಜಿಗವೂ ಆಗಿದೆ. ದೇವರಾಯನದುರ್ಗದಿಂದ ಅವರ ಪ್ರಯಾಣ ಪ್ರಾರಂಭವಾಗುವುದರಿಂದ ದಿನಚರಿಯೂ ಅಲ್ಲಿಂದಲೇ ಪ್ರಾರಂಭವಾಗುತ್ತದೆ. 88 ದಿನಗಳ ನಂತರ ಪಂಢರಾಪುರದಲ್ಲಿದ್ದ ವಿವರಗಳಿವೆ. ಅಲ್ಲಿ ಯಾರೋ ಒಬ್ಬ ಮಹಿಳೆ ಶ್ರೀಶೈಲಕ್ಕೆ ಹೋಗೋಣ ಬನ್ನಿ ಎಂದು ಕರೆದಳೆಂದು ತಿಳಿಸಿದ್ದಾರೆ. ಆದರೆ ಅವರಲ್ಲಿಗೆ ಹೋದರೋ ಇಲ್ಲವೋ ತಿಳಿಯುವುದಿಲ್ಲ. ಏಕೆಂದರೆ, ಅವರು ದಿನಚರಿಯನ್ನು ಒಂದು ಸಾಧಾರಣ ನೋಟ್​ಬುಕ್​ನಲ್ಲಿ ಬರೆದಿರುವುದರಿಂದ ಮುಂದಿನ ಪುಟಗಳು ಶಿಥಿಲವಾಗಿ ಹರಿದು ಹೋಗಿವೆ.

ಸರಳ ಕನ್ನಡದ ಮಹಾಕಾವ್ಯ: ಚೆಂದದ ಪ್ರಾಸಗಳು, ಉತ್ತಮ ಲಯ, ಸರಳವಾದ ಪದಗಳು ಇವು ಅಂಬಾಬಾಯಿಯವರ ‘ಶ್ರೀರಾಮಕಥಾಮೃತಸಾರ’ ಕಾವ್ಯದ ಮಹತ್ವಗಳು. ಉದಾಹರಣೆಗೆ
ಮುಕ್ತಿಯೋಗ್ಯನೊ ನೀನು
ಚಿತ್ತಚಂಚಲ ಲಕುಮಿ
ಪೊತ್ತದೇಹವ ನಿನಗೆ ತೆತ್ತೆನೆನುತಾ
ಮುಕ್ತಾರ್ಥ ಮುದದಿಂದ
ಭಕ್ತ ಹನುಮನ ಕರೆದು
ಇತ್ತನಾಲಿಂಗವನು ರಾಮಚಂದ್ರ
ಇದು ಹನುಮಂತನು ಸೀತೆಯನ್ನು ಭೇಟಿ ಮಾಡಿ ಬಂದಾಗ ರಾಮನು ತನ್ನ ಹರುಷವನ್ನು ವ್ಯಕ್ತಪಡಿಸಿದ ಬಗೆಯನ್ನು ಹೇಳುವ ಪದ್ಯ.

(ಡಾ.ಶಾಂತಾ ನಾಗರಾಜ್ – ಲೇಖಕರು ಕನ್ನಡದ ಹಿರಿಯ ಬರಹಗಾರ್ತಿ)

Story Credit : Vijayavani.net